ನಿಷಿದ್ಧ ಸರಕು -
	ಯುದ್ಧನಿರತವಾದ ಪಕ್ಷಗಳಿಗೆ ತಟಸ್ಥ ಪಕ್ಷದವರು ಒದಗಿಸಕೂಡದೆಂದು ನಿಯಮ ಮಾಡಿರುವ ಸರಕು (ಕಾಂಟ್ರಾಬ್ಯಾಂಡ್). ಯಾವ ಸರಕು ನಿಷಿದ್ಧ ಎಂಬುದು ಆಯಾ ಸಂದರ್ಭಕ್ಕೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ಶಸ್ತ್ರಾಸ್ತ್ರಗಳು ಶುದ್ಧಾಂಗವಾಗಿ ನಿಷಿದ್ಧವೆಂಬ ವಿಚಾರದಲ್ಲಿ ವಿವಾದಕ್ಕೆ ಆಸ್ಪದವಿಲ್ಲ. ಆದರೆ ನೇರವಾಗಿ ಯುದ್ಧಕ್ಕೆ ಉಪಯೋಗವಾಗದ ಸರಕುಗಳ ಪೈಕಿ ಯಾವುದು ನಿಷಿದ್ಧವೆಂಬುದರ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಅವು ನಿಷಿದ್ಧವಾಗಬಹುದು. ಯಾವ ಸರಕುಗಳನ್ನು ನಿಷಿದ್ಧವೆಂದು ಎಣಿಸಬಹುದು ಎನ್ನುವುದನ್ನು ನಿರ್ಧರಿಸುವಾಗ ಬಹಳ ತೊಡಕು ಉಂಟಾಗುತ್ತದೆ. ಇದನ್ನು ತಪ್ಪಿಸುವುದಕ್ಕೆ ಒಪ್ಪಂದಗಳಲ್ಲಿ ಇಲ್ಲವೇ ಸಾಮಾನ್ಯ ಒಡಂಬಡಿಕೆಗಳಲ್ಲಿ ಅಂಥ ಸರಕುಗಳನ್ನು ಸ್ಪಷ್ಟವಾಗಿ ನಮೂದಿಸುವುದುಂಟು. ಆದರೆ ಯುದ್ಧ ಕಾಲದಲ್ಲಿ ಈ ವರ್ಗೀಕರಣಕ್ಕೆ ಯಾವಾಗಲೂ ಮಾನ್ಯತೆ ನೀಡಲಾಗುವುದಿಲ್ಲ. ಅಲ್ಲದೆ ದೇಶದಿಂದ ದೇಶಕ್ಕೆ ಯುದ್ದದಿಂದ ಯುದ್ಧಕ್ಕೆ ಈ ವರ್ಗೀಕರಣ ಬದಲಾಗುತ್ತದೆ. ಯಾವ ಸರಕು ಶತ್ರುವಿನ ಬಂದರಿಗೆ ನೇರವಾಗಿ ಸಾಗಿಸಲ್ಪಟ್ಟಲ್ಲಿ ನಿಷಿದ್ಧ ಸರಕೆಂದು ಎಣಿಸಲ್ಪಡುವುದೋ ಅಂಥ ಸರಕು ತಟಸ್ಥ ದೇಶವೊಂದರ ಬಂದರಿಗೆ ರವಾನೆಯಾಗುತ್ತಿದ್ದರೂ ಅದನ್ನು ಮುಂದೆ ಭೂಮಿ ಇಲ್ಲವೇ ಸಮುದ್ರ ಮಾರ್ಗವಾಗಿ ಶತ್ರುವಿಗೆ ಕಳುಹಿಸಲಾಗುವುದೆಂಬುದು ಸಾಬೀತಾಗುವಂತಿದ್ದರೆ, ಯುದ್ಧದಲ್ಲಿ ತೊಡಗಿರುವ ಇನ್ನೊಂದು ದೇಶ ಅದನ್ನು ವಶಪಡಿಸಿಕೊಳ್ಳಬಹುದು. ಇದನ್ನು ಅವಿಚ್ಛಿನ್ನ ಯಾನ ಸಿದ್ಧಾಂತ ಎಂದು ಕರೆಯಲಾಗುತ್ತದೆ. ಈ ಸಿದ್ಧಾಂತವನ್ನು ಮೊತ್ತ ಮೊದಲಿಗೆ ಅಮೆರಿಕದ ನೌಕಾಖಾತೆಯ ನ್ಯಾಯಾಲಯಗಳು ಅಮೆರಿಕನ್ ಅಂತರ್ಯುದ್ಧದ ಕಾಲದಲ್ಲಿ ಅನುಸರಿಸಿದವು. ಯುದ್ಧದಲ್ಲಿ ತೊಡಗಿರುವ ದೇಶಗಳು ತಟಸ್ಥ ದೇಶಗಳ ವ್ಯಾಪಾರದ ಮೇಲೆ ಹಾಕಬಹುದಾದ ನಿರ್ಬಂಧಗಳ ಬಗ್ಗೆ ಸರ್ವ ಸಮ್ಮತವಾಗುವ ಒಂದು ಕಾನೂನನ್ನು ತಯಾರಿಸುವ ಉದ್ದೇಶದಿಂದ 1908ರಲ್ಲಿ ಹತ್ತು ನೌಕಾರಾಷ್ಟ್ರಗಳು ಲಂಡನ್ನಿನಲ್ಲಿ ಸಭೆ ಸೇರಿದ್ದವು. ಇವು ಹೊರಡಿಸಿದ ಘೋಷಣೆಯಲ್ಲಿ ಸರಕುಗಳನ್ನು 1. ಸಂಪೂರ್ಣ ನಿಷಿದ್ಧ, 

2. ಸಷರತ್ ನಿಷಿದ್ಧ ಮತ್ತು 3. ಮುಕ್ತ ಎಂದು ವರ್ಗೀಕರಿಸಲಾಯಿತು. ಮೊದಲನೆಯ ವರ್ಗದಲ್ಲಿ ಸೇರುವ ಸರಕುಗಳನ್ನು (ಯುದ್ಧ ಸಾಮಗ್ರಿ) ಶತ್ರುಪ್ರದೇಶದಲ್ಲಿರುವ ಯಾವುದೇ ಗಮ್ಯಸ್ಥಾನದ ಹಾದಿಯಲ್ಲಿ ಹಿಡಿಯಬಹುದಾಗಿತ್ತು. ಎರಡನೆಯ ವರ್ಗದಲ್ಲಿ ಸೇರುವ ಆಹಾರ, ಬಟ್ಟೆ, ರೈಲುಬಂಡಿ ಮುಂತಾದವನ್ನು ಅವು ಶತ್ರು ಸರ್ಕಾರಕ್ಕೆ ಇಲ್ಲವೇ ಸೈನ್ಯಕ್ಕೆ ರವಾನೆಯಾಗುತ್ತಿದ್ದರೆ ಮಾತ್ರ ನಿಷಿದ್ಧ ಸರಕುಗಳೆಂದು ಎಣಿಸಬಹುದಾಗಿತ್ತು. ಯಾವುದೇ ಕಾರಣದಿಂದಾಗಿಯೂ ವಶಪಡಿಸಿಕೊಳ್ಳಲಾಗದ ಸರಕುಗಳು ಮೂರನೆಯ ವರ್ಗದವು. ಒಂದನೆಯ ಮಹಾಯುದ್ಧದ ಪ್ರಾರಂಭದಲ್ಲಿ ಎರಡೂ ಪಕ್ಷಗಳು ಈ ಘೋಷಣೆಯಂತೆ ನಡೆದುಕೊಂಡವು. ಆದರೆ ಯುದ್ಧ ತೀವ್ರವಾದಾಗ ರಬ್ಬರ್, ಹತ್ತಿ, ಸಾಬೂನು ಮೊದಲಾದ ಮೂರನೆಯ ವರ್ಗದಲ್ಲಿ ಸೇರುವ ಸರಕುಗಳನ್ನೂ ಪೂರ್ಣ ನಿಷಿದ್ಧ ಎಂದು ಭಾವಿಸಲಾಯಿತು. ಕೊನೆಗೆ 1916ರಲ್ಲಿ ಘೋಷಣೆಯನ್ನು ಪೂರ್ತಿಯಾಗಿ ಕಡೆಗಣಿಸಲಾಯಿತು.

	ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ತಟಸ್ಥ ದೇಶಗಳು ತಮ್ಮ ಸರಕುಗಳನ್ನು ತಮ್ಮವೇ ಆದ ನೌಕೆಗಳಲ್ಲಿ ಒಯ್ಯುತ್ತಿದ್ದರೂ ಅವು ಕೊನೆಯಲ್ಲಿ ಶತ್ರುವನ್ನು ತಲುಪುವವಾಗಿದ್ದರೆ ಯುದ್ಧದಲ್ಲಿ ತೊಡಗಿರುವ ಇನ್ನೊಂದು ದೇಶ ಅದನ್ನು ನಿಷಿದ್ಧ ಸರಕುಗಳೆಂದು ಹಿಡಿದು ವಶಪಡಿಸಿಕೊಳ್ಳಬಹುದು. ಒಂದು ದೇಶ ಶತ್ರುದೇಶದ ಘೋಷಿತ ಬಂದರು ಇಲ್ಲವೇ ಕರಾವಳಿಯೊಡನೆ ವ್ಯಾಪಾರ ಮತ್ತು ಇನ್ನಿತರ ಸಂಬಂಧಗಳನ್ನು ಮುತ್ತಿಗೆಯ ಮೂಲಕ ತಡೆಯಬಹುದು ಮತ್ತು ನಿಷಿದ್ಧ ಸರಕನ್ನು ಹಿಡಿಯಲು ಇರುವ ಹಕ್ಕನ್ನು ಉಪಯೋಗಿಸಿ, ತಟಸ್ಥ ದೇಶಗಳು ಆ ದೇಶಕ್ಕೆ ಸೈನಿಕ ಮಹತ್ತ್ವವಿರುವ ಸರಕುಗಳನ್ನು ಒದಗಿಸುವುದನ್ನು ಪ್ರತಿಬಂಧಿಸಬಹುದು. ತಟಸ್ಥ ದೇಶಗಳ ಸರಕುಗಳನ್ನು ಯುದ್ಧದಲ್ಲಿ ತೊಡಗಿರುವ ದೇಶ ಹಿಡಿದು ವಶಪಡಿಸಿಕೊಳ್ಳುವುದನ್ನು ಅವು ಪ್ರತಿಭಟಿಸುವಂತಿಲ್ಲ. ನಿಷಿದ್ಧ ಸರಕಿನ ಸಂಬಂಧವಾದ ಅಂತರರಾಷ್ಟ್ರೀಯ ಕಾನೂನಿನ ಬಗ್ಗೆ ಒಮ್ಮತ ಇಲ್ಲ. ಬ್ರಿಟನ್ ಮೊದಲಾದ ನೌಕಾಬಲಿಷ್ಠ ದೇಶಗಳು ಸರಕನ್ನು ವಶಪಡಿಸಿಕೊಳ್ಳುವ ಹಕ್ಕನ್ನು ವಿಸ್ತರಿಸಲು ಪ್ರಯತ್ನಿಸಿವೆ. ತಾಟಸ್ಥ್ಯವನ್ನು ಬಯಸುತ್ತಿದ್ದ ಹಾಗೂ ನೌಕಾಬಲ ಕಡಿಮೆಯಿದ್ದ ದೇಶಗಳು ಈ ಹಕ್ಕನ್ನು ಕುಂಠಿತಗೊಳಿಸಲು ಯತ್ನಿಸಿದ್ದುಂಟು. ಸರಕುಗಳ ವರ್ಗೀಕರಣ, ಗಮ್ಯಸ್ಥಾನದ ಬಗ್ಗೆ ಪುರಾವೆ ಮತ್ತು ಅಂಗೀಕಾರಾರ್ಹ ದಂಡನೆ ಇವುಗಳ ವಿಚಾರವಾಗಿ ವಾದಗಳು ಎದ್ದಿವೆ.
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ